ಉಡುಪಿ ಕೇಸರಿ ಧ್ವಜ ವಿವಾದ: ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದ ಜಿಲ್ಲಾಧಿಕಾರಿ; ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ, ಬಿ
ಉಡುಪಿ ಕೇಸರಿ ಧ್ವಜ ವಿವಾದ: ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದ ಜಿಲ್ಲಾಧಿಕಾರಿ; ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ, ಬಿಜೆಪಿ ಕಿಡಿ
- By Netra --
- Wednesday, 21 Jan, 2026
ಉಡುಪಿ: ಇಲ್ಲಿನ ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನವರಿ 18 ರಂದು ಪರ್ಯಾಯ ಮೆರವಣಿಗೆಗೆ ಚಾಲನೆ ನೀಡುವಾಗ ಕೇಸರಿ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
'ಉಡುಪಿ ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯೋತ್ಸವ ಕಾರ್ಯಕ್ರಮದ ಭಾಗವಾಗಿ ಜನವರಿ 18ರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕರ್ತವ್ಯದ ಭಾಗವಾಗಿ, ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಅದೇ ರೀತಿ, ನೂತನ ಪರ್ಯಾಯ ಸ್ವಾಮೀಜಿಯ ಸನ್ಮಾನ ಸಮಾರಂಭ ಮತ್ತು ಸ್ವಾಮೀಜಿ ಸರ್ವಜ್ಞ ಪೀಠವನ್ನು ಏರಿದ ನಂತರ ನಡೆದ ದರ್ಬಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಇದರಲ್ಲಿ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಇರಲಿಲ್ಲ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ನಾನು ಬಯಸುತ್ತೇನೆ' ಸ್ವರೂಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನವರಿ 18 ರಂದು ನಡೆದ ಪರ್ಯಾಯವು ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಧಾರ್ಮಿಕ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಶಿರೂರು ಮಠಕ್ಕೆ ವಿಧ್ಯುಕ್ತವಾಗಿ ವರ್ಗಾಯಿಸುವ ಸಂಕೇತವಾಗಿದ್ದು, ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ 2026-28ರ ಅವಧಿಗೆ ದೇವಾಲಯದ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು.


